ವಚನ ಮಂಟಪ

 

*ಆಸರೆ ಸಿರಿಗನ್ನಡ_ವಚನಮಂಟಪ.*


🌺🌺🌺🌺🌺🌺🌺🌺🌺🌺🌺


*ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು,*

*ತವರಾಜದ ನೊರೆ ತೆರೆಯಂತೆ,ಆದ್ಯರ ವಚನವಿರಲು,*

*ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ*

*ಆಯಿತ್ತೆನ್ನ ಮತಿ, ಕೂಡಲಸಂಗಮದೇವಾ.*


🌺🌺🌺🌺🌺🌺🌺🌺🌺🌺

ವಚನದ ಧ್ವನಿ ಸುರುಳಿ ಕೇಳಲು ಧ್ವನಿ ಸುರುಳಿ ಅಕ್ಷರದ ಮೇಲೆ ಮುಟ್ಟಿ.

ವಚನದಧ್ವನಿ ಸುರುಳಿ


*ಕನ್ನಡ ವ್ಯಾಖ್ಯಾನ*


ಬಸವಣ್ಣನವರು ತಮ್ಮ ಕಾಲಕ್ಕೆ ಹಿಂದಿನ ಮಾದಾರ ಚೆನ್ನಯ್ಯ, ದೇವರ ದಾಸಿಮಯ್ಯ, ಶಂಕರ ದಾಸಿಮಯ್ಯ ಮುಂತಾದ ಆದ್ಯ ಶಿವಶರಣರ ವಚನಗಳು ಭಕ್ತಿಜ್ಞಾನವೈರಾಗ್ಯವನ್ನು ಮಧುರ ಮನೋಹರವಾಗಿ ಬೋಧಿಸಲು ಸಲೀಲವಾಗಿ ತಮ್ಮ ಮುಂದೆಯೇ ರಾರಾಜಿಸುತ್ತಿರುವಾಗ-ತಾವೇ ಪ್ರತ್ಯೇಕವಾಗಿ ಕೂಡಲಸಂಗ ಎಂಬ ಅಂಕಿತದಿಂದ ವಚನಗಳನ್ನು ರಚಿಸುತ್ತಿರುವ ತಮ್ಮ ವ್ಯರ್ಥಸಾಹಸವನ್ನು ಹಳಿದುಕೊಳ್ಳುತ್ತಿರುವರು.


ಬೆಲ್ಲದ ಕೆಸರಿನ, ಸಕ್ಕರೆಯ ಮಳಲಿನ, ತವರಾಜರ ನೊರೆತೆರೆಯ ಹಾಲತೊರೆಯೊಂದು-ತಳದಿಂದ ಅಲೆಯವರೆಗೆ, ತಡಿಯಿಂದ ತಡಿಯವರೆಗೆ, ಉದ್ದಕ್ಕೂ ಮಧುರಾತಿಮಧುರವಾಗಿ ತನ್ನ ಮುಂದೆಯೇ ಹರಿಯುತ್ತಿರುವಾಗ ಆ ಅಮೃತಪ್ರವಾಹವನ್ನು ಬೊಗಸೆಗೈಯಿಂದ ಈಂಟಿ ತಣಿಯಲರಿಯದೆ-ತಾನೇ ಒಂದು ಪ್ರತ್ಯೇಕವಾದ ಭಾವಿಯನ್ನು ಬೆವರು ಸುರಿಸಿ ತೋಡಿ, ಒರೆತ ಉಪ್ಪುನೀರನ್ನು ಕುಡಿಯುವ ನಿರ್ಭಾಗ್ಯನೊಬ್ಬನ ಮತಿಹೀನತೆಗೆ ಸಮವಾಯಿತು ತಮ್ಮ ವಚನ ರಚನೆಯ ವ್ಯರ್ಥಚೇಷ್ಟೆಯೆನ್ನುತ್ತಿರುವರು ಬಸವಣ್ಣನವರು.


ಹೀಗೆ ಆದ್ಯರ ವಚನಗಳ ಹರಹಿಗೆ ಆಳಕ್ಕೆ ಓಘಕ್ಕೆ ಮಾಧುರ್ಯಕ್ಕೆ ಮನಸೋತಿದ್ದ ಬಸವಣ್ಣನವರು ತಮ್ಮ ವಚನಗಳನ್ನು ಎಷ್ಟೇ ಹಳಿದುಕೊಂಡಿರುವರಾದರೂ-ಅದು ಅವರ ವಿನಯವೇ ಹೊರತು ಯಥಾರ್ಥವಲ್ಲ. ಅವರ ವಚನಗಳು ಜ್ಞಾನದ ಹರಹಿನಿಂದ ವೈರಾಗ್ಯದ ಸೆಳವಿನಿಂದ ಭಕ್ತಿಯ ಮಾಧುರ್ಯದಿಂದ ವಿಶ್ವ ಸಾಹಿತ್ಯದ ಹೆಗಲೆಣೆಯಾಗಿ ನಿಲ್ಲಬಲ್ಲುವೆಂಬುದನ್ನು ಮರೆಯಬಾರದು.


- ವ್ಯಾಖ್ಯಾನಕಾರರು

*ಡಾ.ಎಲ್. ಬಸವರಾಜು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಸರೆ ತಂತ್ರಜ್ಞಾನ ಪ್ರಮುಖ ವೀಡಿಯೋಗಳು.

 ಆತ್ಮೀಯ ಶಿಕ್ಷಕ ಮಿತ್ರರೇ, ಶಿಕ್ಷಕರ e-ಕಲಿಕೆಗೆ ಸಂಬಂಧಿಸಿದ ಪ್ರಮುಖ ವಿಡಿಯೋ ಲಿಂಕ್ಸ್. 1. Google Docs https://youtu.be/zg9cBOvObaI?si=kLF4AydJrg26VJYA 2...