ಪಡೆನುಡಿ/ನುಡಿಗಟ್ಟುಗಳ ಸಂಗ್ರಹ

     ಪಡೆನುಡಿ/ನುಡಿಗಟ್ಟುಗಳು

    ವಿಶೇಷಾರ್ಥವನ್ನು ಕೊಡುವ ಅರ್ಥವ್ಯಾಪ್ತಿಯನ್ನು ವಿಸ್ತರಿಸುವ, ವಿಶೇಷ ಬಗೆಯ ಪದಸಮುಚ್ಛಯಗಳೇ ನುಡಿಗಟ್ಟುಗಳು.

    ನುಡಿಗಟ್ಟುಗಳು ಯಾವುದೇ ಭಾಷೆಗೆ ಕಸುವನ್ನು ತುಂಬಬಲ್ಲ ಸತ್ವವುಳ್ಳದ್ದು. ನಾವು ಮಾತನಾಡುವಾಗ ವಿಶೇಷ ಅರ್ಥಗಳನ್ನು ಸ್ಪುರಿಸುವ ಸಲುವಾಗಿಯೇ ನುಡಿಗಟ್ಟುಗಳನ್ನು ಆಶ್ರಯಿಸುತ್ತೇವೆ. ನುಡಿಗಟ್ಟುಗಳಿಂದಾಗಿ ನಾವು ಬಳಸುವ ಭಾಷೆಯ ಬಂಧ, ಸೊಗಸು ಹೆಚ್ಚಾಗುತ್ತದೆ. ವಿಶೇಷಾರ್ಥದ ಜೊತೆಗೆ ನಮ್ಮ ಮಾತಿನ ಅರ್ಥವ್ಯಾಪ್ತಿಯನ್ನು ವಿಸ್ತರಿಸುವ ಶಕ್ತಿ ನುಡಿಗಟ್ಟುಗಳಿಗಿವೆ. ಯಾವುದೇ ಜೀವಂತ ಭಾಷೆಗಳಲ್ಲೂ ನುಡಿಗಟ್ಟುಗಳು ಸಮೃದ್ಧವಾಗಿ ವ್ಯಾಪಿಸಿಕೊಂಡಿರುವುದನ್ನು ಗಮನಿಸಬಹುದು. ಈ ವಿಧದಲ್ಲಿ ವಿಶೇಷಾರ್ಥವನ್ನು ಕೊಡುವ, ಆರ್ಥವ್ಯಾಪ್ತಿಯನ್ನು ವಿಸ್ತರಿಸುವ, ವಿಶೇಷ ಬಗೆಯ ಪದಸಮುಚ್ಛಯಗಳನ್ನು ನುಡಿಗಟ್ಟುಗಳು ಅಥವಾ ಪಡೆನುಡಿಗಳು" ಎಂದು ಕರೆಯಬಹುದು.

ಕೆಲವು ಪ್ರಸಿದ್ಧ ನುಡಿಗಟ್ಟುಗಳು
     ಕಣ್ತೆರೆ : ಎಚ್ಚರಗೊಳ್ಳು, ಜ್ಞಾನೋದಯವಾಗು.
ಕತ್ತಿಮಸೆ : ಕತ್ತಿಯನ್ನು ಹರಿತಮಾಡು, ಪ್ರತೀಕಾರಕ್ಕೆ ಸಿದ್ಧನಾಗು.
ಇಂಗಿಹೋಗು : ಒಣಗು, ಸಂಪೂರ್ಣ ಹಾಳಾಗು.
ಕೈಕೊಡು : ಮೋಸಮಾಡು, ಓಡಿಹೋಗು.
ಕೈಕೆಸರು ಮಾಡಿಕೋ : ಬೇಸಾಯ ಮಾಡು, ಕಷ್ಟಪಡು.
ಅಂಗೈನೆಲ್ಲಿ : ಸುಲಭವಾದದು.
ಅಡ್ಡದಾರಿ ಹಿಡಿ : ಕೆಟ್ಟ ಕೆಲಸಗಳನ್ನು ಮಾಡು.
ಅಬ್ಬೇಪಾರಿ : ಜವಾಬ್ದಾರಿಯಿಲ್ಲದವ.
ಉಸಿರಡಗು : ಮರಣಹೊಂದು.
ಎದೆಗೆಡು : ಧೈರ್ಯಗುಂದು
ಒಂದು ಕಲ್ಲೆಸೆ : ಒಮ್ಮೆ ಪ್ರಯತ್ನಿಸಿ ನೋಡು.
ಒಳಗಣ್ಣು : ಅಂತರಂಗ.
ಕಂಕಣ ಕಟ್ಟು : ಕೆಲಸಕ್ಕೆ ಸಿದ್ಧನಾಗು.
ಕಂಬಿ ಕೀಳು : ಓಡಿ ಹೋಗು.
ಕಣಿಕೇಳು : ಗೊತ್ತಿರುವುದನ್ನು ಮತ್ತೆ ಮತ್ತೆ ಕೇಳು.
ಕಣ್ಣು ಹೊಡೆ : ಸನ್ನೆಮಾಡು.
ಕಾಡುಪಾಲು : ದಿಕ್ಕಿಲ್ಲದ.
ರಕ್ತಬಸಿ : ತುಂಬಾಕಷ್ಟಪಡು.
ಶಕುನಿ : ಚಾಡಿಕೋರ, ದುಷ್ಟ.
ಹಣ್ಣುಹಣ್ಣಾಗು : ಆಯಾಸಹೊಂದು, ಬಳಲು.
ಕೋಳಿನಿದ್ದೆ : ಸ್ವಲ್ಪಕಾಲ ನಿದ್ದೆ.
ಗಾಳಹಾಕು : ಆಸೆ ತೋರಿಸು.
ಚಿನ್ನದ ಕತ್ತಿ : ಬೆಲೆ ಬಾಳುವ.
ತಲೆಕೆಳಗಾಗು : ಅಸ್ತವ್ಯಸ್ತವಾಗು.
ತಿಂದುಹಾಕು : ನಾಶಮಾಡು.
ತುಂಬಿದಕೊಡ : ಅಹಂಕಾರವಿಲ್ಲದ ವ್ಯಕ್ತಿ.
ನೀರುಕುಡಿಸು : ಸತಾಯಿಸು.
ಪುಸ್ತಕದ ಹುಳು : ಸದಾಕಾಲ ಓದುವವ.
ಬಕಾಸುರ : ಯಾವಾಗಲೂ ತಿನ್ನುವವ.
ಬಾಲ ಹಿಡಿ : ಹಿಂಬಾಲಿಸು.
ಮಣ್ಣುಗೂಡು : ನಾಶವಾಗು.
ಲೆಕ್ಕಹಾಕು : ಯೋಚಿಸು, ಚಿಂತಿಸು.
ಸಿಡಿಲಮರಿ : ಬಹಳ ಚೂಟಿ.
ಹದ್ದುಮೀರು : ಅಂಕೆಮೀರು. 
ಅಕ್ಕಲಾಯವಾಗಿ ಸಿಕ್ಕು = ಪುಗಸಟ್ಟೆ ಸಿಕ್ಕು, ಬಿಟ್ಟಿ ಸಿಕ್ಕು
ಅಕ್ಕತಂಗಿಯೋರ ಹಣ್ಣಿನಂತಿರು = ಕೆಂಪಗಿರು
ಅಕ್ಕಲಿಲ್ಲದೆ ಒಕ್ಕಲು ಹೋಗು = ಬುದ್ಧಿ ಇಲ್ಲದೆ ವಲಸೆ ಹೋಗು
ಅಕ್ಕಳಿಸು ಬರು = ಸಂಭೋಗಿಸು ಬರು.
ಅಖಾಡಕ್ಕಿಳಿ = ವಾದಕ್ಕಿಳಿ, ಹೊಡೆದಾಟಕ್ಕಿಳಿ.
ಅಗಣಿಗೂಟ ಜಡಿ = ಅಡ್ಡಿ ಮಾಡು, ದ್ರೋಹವೆಸಗು
ಅಗಲಿಸಿದಾಗ ತಗುಲಿಸು = ಅಗಲಿಗಿಟ್ಟಾಗ ಉಣ್ಣು, ಸಮ್ಮತಿಸಿದಾಗ ಸಂಭೋಗಿಸು
ಅಗಳೊಂದ್ಕಡೆ ಗಂಜಿಯೊಂದ್ಕಡೆ ಆಗು = ಸಲೀಸಾಗಿ ಹೆರಿಗೆಯಾಗು, ಮಗು ಬಾಣಂತಿ ಬೇರೆಯಾಗು.
ಅಗ್ಗಾರು ಹತ್ತು = ಬಾಯೊಣಗು, ಎದಯೊಣಗು
ಅಗಿದರೆ ಸವೆಯದಿರು ನುಂಗಿದರೆ ಇಳಿಯದಿರು = ಯಾವುದಕ್ಕೂ ಬಗ್ಗದಿರು, ಲೋಭಿಯಾಗಿರು.
ಅಜ್ಜನ ಕಾಲದ್ದು ಹೇಳದಿರು = ಪುರಾಣ ಹೇಳದಿರು, ಅಪ್ರಸ್ತುತವಾದದ್ದನ್ನು ಹೇಳದಿರು
ಅಜ್ಜಿಗೆ ಕೆಮ್ಮು ಕಲಿಸು = ಅನುಭವಿಗೆ ತಿಳಿ ಹೇಳುವ ಅವಿವೇಕ ಮಾಡು
ಅಜ್ಜಿ ಮಂಚ ತಲೆಕೆಳಗಾಗು = ಬೆಳಗಿನ ಜಾವವಾಗು
ಅಟಕಾವು ಮಾಡು = ಅಡ್ಡಿಪಡಿಸು, ತಡೆಗಟ್ಟು
ಅಟ್ಟಕ್ಕೇರಿಸು = ಉಬ್ಬಿಸು, ತಲೆ ಮೇಲೆ ಹೊತ್ಕೊಂಡು ಮೆರೆಸು.
ಅಟ್ಟಕ್ಕೊಂದು ಕಾಲು ಬೆಟ್ಟಕ್ಕೊಂದು ಕಾಲು ಹಾಕು = ಆತುರಾತುರವಾಗಿ ವರ್ತಿಸು, ತರಾತುರಿಯಲ್ಲಿರು.
ಅಟ್ಟಾಡಿಸು = ಓಡಾಡಿಸು, ಸಂಭೋಗಿಸಲು ಪ್ರಯತ್ನಿಸು
ಅಟ್ಟಿಕ್ಕಿದೋರಿಗಿಂತ ಬೊಟ್ಟಿಕ್ಕಿದೋರು ಹೆಚ್ಚಾಗು = ನಡುಮುರಿದು ದುಡಿಯೋರಿಗಿಂತ ನಾಟಕ ಆಡೋರು ಪ್ರಿಯವಾಗು.
ಅಟ್ಲು ಮಾಡು = ಕೆಸರು ಮಾಡು
ಅಡಕವಾಗಿರು = ಮಿತಿಯಲ್ಲಿರು, ಗಂಭೀರವಾಗಿರು
ಅಡಕೆಗೆ ಮಾನ ಹೋಗು = ಚಿಕ್ಕಾಸಿಗೆ ಗೌರವ ಹಾಳಾಗು
ಅಡಕೆಗೆ ಕಡೆಯಾಗಿ ಕಾಣು = ಚಿಕ್ಕಾಸಿಗಿಂತ ಕೀಳಾಗಿ ಕಾಣು.
ಅಡಕೆಲೆ ಹಾಕ್ಕೊಂಡು ಉಗಿ = ಅವಮಾನ ಮಾಡು, ಬಯ್ಯಿ
ಅಡಪಡ ಎನ್ನು = ಆವುಟ ಮಾಡು, ಸಿಟ್ಟುದೋರು, ಕೊಂಗ ಮಾತಾಡು
ಅಡಗಲ್ಲಿನಂತಿರು = ಗಟ್ಟಿಮುಟ್ಟಾಗಿರು, ಕಟ್ಟುಮಸ್ತಾಗಿರು
ಅಡವಾಗಿ ಸಿಕ್ಕು = ಕೈತುಂಬ ಸಿಕ್ಕು, ಸಮೃದ್ಧವಾಗಿ ಸಿಕ್ಕು
ಅಡವು ಸಿಕ್ಕದಿರು = ಸಂದು ಸಿಕ್ಕದಿರು, ಅವಕಾಶ ಸಿಕ್ಕದಿರು.
ಅಡ್ಡಗಟ್ಟೆ ಹಾಕು = ಅಡ್ಡಿಯುಂಟು ಮಾಡು, ತಡೆ ಮಾಡು
ಅಡ್ಡಗೋಡೆ ಮೇಲೆ ದೀಪ ಇಡು = ಅನಿಶ್ಚಯದ ಮಾತಾಡು, ಈಕಡೆಯೋ ಆಕಡೆಯೋ ಎಂಬುದರ ಖಚಿತ ಸುಳಿವು ಕೊಡದಿರು
ಅಡ್ಡದಾರಿಗಿಳಿ = ಕೆಟ್ಟನಡತೆಗಿಳಿ
ಅಡ್ಡನಾಡಿ ಬುದ್ಧಿ ತೋರಿಸು = ಬೆರಕೆ ಬುದ್ಧಿಕ ತೋರಿಸು, ಹಾದರಕ್ಕೆ ಹುಟ್ಟಿದ ಬುದ್ಧಿ ತೋರಿಸು
ಅಡ್ಡ ಬೀಳು = ದೀರ್ಘದಂಡ ನಮಸ್ಕಾರ ಮಾಡು.
ಅಡ್ಡ ಮಾತು ತೆಗೆ = ವಿಷಯಾನಂತರ ಮಾಡು, ಮುಖ್ಯ ವಿಷಯವನ್ನು ಮರೆಮಾಜಲು ಯತ್ನಿಸು.
ಅಡ್ಡವಾಗು = ಮಲಗು, ವಿಶ್ರಾಂತಿ ಪಡೆ.
ಅಡ್ಡ ಹಿಡಿ = ತಲೆ ಹಿಡುಕ ಕೆಲಸ ಮಾಡು
ಅಡಾಯದಿರು = ಹೊಂದಿಕೆಯಾಗದಿರು
ಅಡಾವುಡಿ ಮಾಡು = ಆವುಟ ಮಾಡು, ಗದ್ದಲ ಮಾಡು.
ಅಡ್ಡಾಡಿಕೊಂಡು ಬರು = ತಿರುಗಾಡಿಕೊಂಡು ಬರು
ಅಡ್ಡಾದಿಡ್ಡಿಗೆ ಹಾಕು = ತಾರುಬಾರು ಹಾಕು, ಅಸ್ತವ್ಯಸ್ತವಾಗಿ ಎಸೆ
ಅಡ್ಡಾದುಡ್ಡಿಗೆ ಮಾರು = ಕಡಮೆ ಬೆಲೆಗೆ ಮಾರು, ಅಗ್ಗದ ಬೆಲೆಗೆ ವಿಕ್ರಯಿಸು.
ಅಡ್ಡಾದುಡ್ಡಿಗೆ ಸೀಯು = ಅಗ್ಗವಾಗಿ ಮಾರು
ಅಡ್ರಿಸಿಕೊಂಡು ಬರು = ಒತ್ತರಿಸಿಕೊಂಡು ಬರು, ಚಾಚಿಕೊಂಡು ಬರು
ಅಡುಟ್ಟನಂಗಾಡು = ಅಸಂಸ್ಕೃತನಾಗಿ ವರ್ತಿಸು
ಅಡು ಬಾಡು ಸುಡು ಬಾಡು ತಿನ್ನು = ಮಾಂಸಲೋಭ ಅತಿಯಾಗಿರು.
ಅಡೂಳಿ ಕೊಡು = ಬಳುವಳಿ ಕೊಡು.
ಅಡೂಳಿ ಐರ್ದಾಳಿ ಮುಟ್ಟದಿರು=ಅವುಗಳನ್ನು ಮಾರದಿರು, ತಿಂದು ತೇಗದಿರು.
ಅಡೆ ಹತ್ತದಿರು ಮೇಲೆ ಸೀಯದಿರು = ತಲೆ ತಾಕದಿರು, ಕಷ್ಟ ಅರಿವಾಗದಿರು 
ಅಡೆ ಹಾಕು = ಒತ್ತೆ ಹಾಕು, ಹಣ್ಣು ಮಾಡು.
ಅಡ್ಡೆ ಹಾಕಿ ಹೊರು = ಸಮೃದ್ಧವಾಗಿರು, ಹೊರಲಾರದಂತಿರು
ಅಡ್ಡೇಟಿಗೊಂದು ಗುಡ್ಡೇಟು ಹಾಕು = ಬಂಜೆ ಹೊಡೆತವನ್ನು ಹೊಡಿ
ಅಣಿ ಮಾಡು = ಸಿದ್ಧ ಮಾಡು, ಸಜ್ಜುಗೊಳಿಸು
ಅಣಿ ಹಾಕು = ಮಾತಿಗೆ ಮಾತು ಕೊಕ್ಕೆ ಹಾಕು, ಮಾತಿಗೆ ಮಾತು ಜೋಡಿಸು
ಅತ್ತಂಡವಾಗು = ಪರಸ್ಪರ ಡಿಕ್ಕಿ ಹೊಡಿ
ಅತ್ತಲ ಕಡ್ಡಿ ತೆಗೆದು ಇತ್ತಿಕ್ಕದಿರು = ಏನೊಂದು ಕೆಲಸವನ್ನೂ ಮಾಡದಿರು.
ಅತ್ತೊಂದು ಮುಖ ಇತ್ತೊಂದು ಮುಖವಾಗು = ವಿರಸವುಂಟಾಗು, ಒಡಕುಂಟಾಗು
ಕಳ್ಳಿ ಹೋಗು = ಬವಳಿ ಬಂದಂತಾಗು, ಸೊರಗಿದಂತಾಗು
ಕಳ್ಳು ಕಿತ್ತ ಬೆಕ್ಕಿನಂತಿರು = ಒಣಗಿಕೊಂಡಿರು, ಮೂಳೆಚಕ್ಕಳವಾಗಿರು
ಕಾಗೆ ಎಂಜಲು ಮಾಡು = ಮೇಲೆ ಬಟ್ಟೆ ಹಾಕಿ ಕಡಿದುಕೊಂಡು, ಕೊಂಚ ಕೊಡು
ಕಾರ ಅರೆ = ಕೇಡು ಬಗೆ, ದ್ವೇಷ ಸಾಧಿಸು
ಕಾಲ ಹಾಕು = ಜೀವನ ಸಾಗಿಸು
ಕಾಲವಾಗು = ಮರಣ ಹೊಂದು
ಗತಿ ಕಾಣಿಸು = ಉತ್ತರ ಕ್ರಿಯೆ ಮಾಡು
ಗತಿಗೆಡಿಸು = ಹಾಳು ಮಾಡು, ನಿರ್ಗತಿಕ ಸ್ಥಿತಿಗೆ ತರು
ಗತಿ ನೆಟ್ಟಗಾಗು = ಹಾಳಾಗು, ಅಪಾಯ ಸಂಭವಿಸು, ಮರಣ ಹೊಂದು
ಗಾಚಾರ ಬಿಡಿಸು = ದೆವ್ವ ಬಿಡಿಸು, ಚೆನ್ನಾಗಿ ಚಚ್ಚು
ಗಾಡಿ ಬಿಡು = ಜಾಗ ಬಿಡು, ಹೊರಡು
ಗಾಳ ಹಾಕು = ಹೊಂಚು ಹಾಕು.
ರಗಳೆ ಮಾಡು = ರಂಪ ಮಾಡು
ರಕ್ತ ಹೀರು = ಶೋಷಣೆ ಮಾಡು
ರಕ್ತ ಹಂಚಿಕೊಂಡು ಬರು = ಒಬ್ಬ ತಾಯಿಯಲ್ಲಿ ಹುಟ್ಟು
ರಕ್ತ ಬಸಿ = ಶ್ರಮಿಸು, ನಿರಂತರವಾಗಿ ದುಡಿ
ರಾಗ ಎಳಿ = ಕೊರಗು, ಕೊಸರಾಡು
ರಾಗ ಬದಲಾಯಿಸು = ಮಾತು ಬದಲಾಯಿಸು, ನಿಲುವು ಬದಲಾಯಿಸು
ರೈಲು ಹತ್ತಿಸು = ಉಬ್ಬಿಸು, ಮರುಳು ಮಾಡು
ರೋಸಿ ಹೋಗು = ಸಾಕು ಸಾಕು ಎನ್ನಿಸು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಸರೆ ತಂತ್ರಜ್ಞಾನ ಪ್ರಮುಖ ವೀಡಿಯೋಗಳು.

 ಆತ್ಮೀಯ ಶಿಕ್ಷಕ ಮಿತ್ರರೇ, ಶಿಕ್ಷಕರ e-ಕಲಿಕೆಗೆ ಸಂಬಂಧಿಸಿದ ಪ್ರಮುಖ ವಿಡಿಯೋ ಲಿಂಕ್ಸ್. 1. Google Docs https://youtu.be/zg9cBOvObaI?si=kLF4AydJrg26VJYA 2...