ನಾಮಪದ

 ನಾಮಪದ   

Dowload to PDF please clik here


 ನಾಮಪದ     

      ನಾವು ಮಾತನಾಡುವ ಮಾತುಗಳಲ್ಲಿ ಅನೇಕ ಬಗೆಯ ಶಬ್ದಗಳಿರುತ್ತವೆ.  ಆ ಶಬ್ದಗಳಿಗೆ ನಾವು ಬೇರೆ ಬೇರೆ ಹೆಸರು ಕೊಟ್ಟಿರುತ್ತೇವೆ.  ಅಂದರೆ ಒಂದೊಂದು ಜಾತೀಯ ಶಬ್ದಗಳನ್ನು ಒಂದೊಂದು ಗುಂಪು ಮಾಡಿ ವ್ಯಾಕರಣದಲ್ಲಿ ಹೇಳುತ್ತೇವೆ.  ಉದಾಹರಣೆಗೆ ಈ ಕೆಳಗಿನ ಮಾತುಗಳಲ್ಲಿಯ ಶಬ್ದಗಳನ್ನು ನೋಡಿರಿ.                

1. ಆತನು ಮನೆಯನ್ನು ಚೆನ್ನಾಗಿ ಕಟ್ಟಿದನು.              

2. ಒಕ್ಕಲಿಗರು ಕಷ್ಟದಿಂದ ಬೆಳೆಯನ್ನು ಬೆಳೆಯುವರು.   ಈ ವಾಕ್ಯಗಳಲ್ಲಿ:-   

1. ಆತನು, ಮನೆಯನ್ನು, ಒಕ್ಕಲಿಗರು, ಕಷ್ಟದಿಂದ, ಬೆಳೆಯನ್ನು-ಇವೆಲ್ಲ ನಾಮಪದಗಳು.   

2. ಕಟ್ಟಿದನು, ಬೆಳೆಯುವರು-ಇವು ಕ್ರಿಯಾಪದಗಳು.   

3. ಚೆನ್ನಾಗಿ-ಎಂಬುದು ಅವ್ಯಯ.     

ಹೀಗೆ ನಾವು ಆಡುವ ಮಾತುಗಳನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ಮಾಡುತ್ತೇವೆ.      

(1) ನಾಮಪದ 

(2) ಕ್ರಿಯಾಪದ 

(3) ಅವ್ಯಯ-ಇವೇ ಆ ಮೂರು ಗುಂಪುಗಳು.                 ಮನೆಯನ್ನು                         

ಮನೆಯದೆಸೆಯಿಂದ                

ಮನೆಯಿಂದ                         

ಮನೆಯ                

ಮನೆಗೆ                             

ಮನೆಯಲ್ಲಿ      ಇವೆಲ್ಲ ‘ನಾಮಪದ’ಗಳು.  ಈ ಪದಗಳಲ್ಲೆಲ್ಲ ‘ಮನೆ’ ಎಂಬುದು ಮೂಲರೂಪ.  ಈ ಮೂಲರೂಪವಾದ ‘ಮನೆ’ ಎಂಬ ಶಬ್ದವನ್ನು ನಾಮಪದದ ಮೂಲರೂಪ ಅಥವಾ ‘ನಾಮಪ್ರಕೃತಿ’ ಎನ್ನುತ್ತೇವೆ.     ಕಟ್ಟಿದನು, ಕಟ್ಟುವನು, ಕಟ್ಟುತ್ತಾನೆ, ಕಟ್ಟಿದರು, ಕಟ್ಟನು, ಕಟ್ಟುವಳು, ಕಟ್ಟಲಿ-ಇವೆಲ್ಲ ಕ್ರಿಯಾಪದಗಳು.  ಇವುಗಳಿಗೆ ಮೂಲರೂಪ, ‘ಕಟ್ಟು’ ಎಂಬುದು.  ಈ ‘ಕಟ್ಟು’ ಎಂಬ ಮೂಲರೂಪವು ಕ್ರಿಯಾಪದದ ಮೂಲರೂಪ. ಇದಕ್ಕೆ ‘ಧಾತು’ ಎಂಬ ಇನ್ನೊಂದು ಹೆಸರುಂಟು. 

ನಾಮವಾಚಕಪ್ರಕೃತಿಗಳಲ್ಲಿ ಮುಖ್ಯವಾಗಿ: 

(ಅ) ವಸ್ತುವಾಚಕಗಳು, 

(ಆ) ಗುಣವಾಚಕಗಳು, 

(ಇ) ಸಂಖ್ಯಾವಾಚಕಗಳು, 

(ಈ) ಸಂಖ್ಯೇಯವಾಚಕಗಳು, 

(ಉ) ಭಾವನಾಮಗಳು, 

(ಊ) ಪರಿಮಾಣವಾಚಕಗಳು, 

(ಋ) ಪ್ರಕಾರವಾಚಕಗಳು, 

(ಎ) ದಿಗ್ವಾಚಕಗಳು, 

(ಏ) ಸರ್ವನಾಮಗಳು -ಎಂದು ಅನೇಕ ಗುಂಪು ಮಾಡಬಹುದು. 

 (ಅ) ವಸ್ತುವಾಚಕಗಳು :-

ವಸ್ತುಗಳ ಹೆಸರನ್ನು ಹೇಳುವ ಶಬ್ದಗಳೆಲ್ಲ ವಸ್ತುವಾಚಕಗಳು. 

ಉದಾಹರಣೆಗೆ:- ಚೇತನವುಳ್ಳ ವಸ್ತುಗಳು-ಮನುಷ್ಯ, ಹೆಂಗಸು, ಬಸವ, ಕೃಷ್ಣ, ಮುದುಕ, ಎತ್ತು, ಎಮ್ಮೆ, ನರಿ, ನಾಯಿ-ಮುಂತಾದವು.   

ಚೇತನವಿಲ್ಲದ ವಸ್ತುಗಳು-ಕಲ್ಲು, ಮರ, ನೆಲ, ಜಲ, ಎಲೆ, ಹೂ, ಹಣ್ಣು, ಕಾಯಿ, ಬೆಟ್ಟ, ಅಡವಿ, ಮಠ, ಮನೆ, ಶಾಲೆ,-ಮುಂತಾದವು.        

ಈ ವಸ್ತುವಾಚಕಗಳನ್ನು 

(1) ರೂಢನಾಮ, 

(2) ಅಂಕಿತನಾಮ,                

(3) ಅನ್ವರ್ಥಕನಾಮ-

ಎಂದು ಮೂರು ವಿಭಾಗ ಮಾಡಬಹುದು.     

(1) ರೂಢನಾಮ-ರೂಢಿಯಿಂದ ಬಂದ ಸಾಮಾನ್ಯವಾಚಕಗಳು ರೂಢನಾಮಗಳು.         ಉದಾಹರಣೆಗೆ:-ನದಿ, ಪರ್ವತ, ಮನುಷ್ಯ, ಹೆಂಗಸು, ಹುಡುಗ, ಪಟ್ಟಣ, ದೇಶ-ಇತ್ಯಾದಿಗಳು.    ಇಲ್ಲಿ ಬಂದಿರುವ ‘ನದಿ’ ಇತ್ಯಾದಿ ಶಬ್ದಗಳು ಎಲ್ಲ ನದಿಗಳಿಗೂ ಅನ್ವಯಿಸುವ ಸಾಮಾನ್ಯವಾಚಕಗಳು.      

(2) ಅಂಕಿತನಾಮ-ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತ ನಾಮಗಳು.          ಉದಾಹರಣೆಗೆ:-ಗಂಗಾ, ಬ್ರಹ್ಮಪುತ್ರಾ, ಕಾವೇರಿ, ಹಿಮಾಲಯ, ವಿಂದ್ಯಾದ್ರಿ, ರಾಮ, ಕೃಷ್ಣ, ಶಂಕರ, ರಂಗ, ಸಾವಿತ್ರಿ, ಬೆಂಗಳೂರು, ಭಾರತ, ಕರ್ನಾಟಕ, ಆಲ, ಬೇವು-ಇತ್ಯಾದಿಗಳು (ಇವೆಲ್ಲ ರೂಢನಾಮಗಳಿಗೆ ಇಟ್ಟ ಹಸರುಗಳೇ ಆಗಿವೆ).       

(3) ಅನ್ವರ್ಥಕನಾಮ-ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ ಅನ್ವರ್ಥಕ ನಾಮಗಳು.          ಉದಾಹರಣೆಗೆ:-ಕುಂಟ, ಹೆಳವ, ಕಿವುಡ, ವ್ಯಾಪಾರಿ, ವಿದ್ವಾಂಸ, ರೋಗಿ, ಯೋಗಿ-ಇತ್ಯಾದಿಗಳು.  

(ಆ) ಗುಣವಾಚಕಗಳು     

ಈ ಕೆಳಗಿನ ವಾಕ್ಯಗಳನ್ನು ಗಮನಿಸಿರಿ_           

(1) ಕೆಂಪುಬಟ್ಟೆಯನ್ನು ತಂದನು.               

(4) ಹಳೆಯ ಅಕ್ಕಿ ಬೇಕು           

(2) ದೊಡ್ಡ ಕಲ್ಲು ಇದೆ.                     

(5) ಕರಿಯ ನಾಯಿ ಇದೆ           

(3) ಚಿಕ್ಕಮಕ್ಕಳು ಇರುತ್ತಾರೆ.     

ಮೇಲಿನ ವಾಕ್ಯಗಳಲ್ಲಿ ‘ಕೆಂಪು’ ಎಂಬುದು ಬಟ್ಟೆಯ ಬಣ್ಣದ ಗುಣವನ್ನೂ, ‘ದೊಡ್ಡ’ ಎಂಬುದು ಕಲ್ಲಿನ ರೀತಿಯನ್ನೂ, ‘ಚಿಕ್ಕ’ ಎಂಬುದು ಮಕ್ಕಳ ರೀತಿಯನ್ನೂ, ‘ಹಳೆಯ’ ಎಂಬುದು ಅಕ್ಕಿಯ ಗುಣವನ್ನೂ, ‘ಕರಿಯ’ ಎಂಬುದು ನಾಯಿಯ ಬಣ್ಣದ ರೀತಿಯನ್ನೂ ತಿಳಿಸುವ ಶಬ್ದಗಳು.  ಇವುಗಳಿಗೆ ವಿಶೇಷಣಗಳೆಂದೂ ಹೆಸರು. 

ಉದಾಹರಣೆಗೆ:-ದೊಡ್ಡ, ಚಿಕ್ಕ, ಕಿರಿದು, ಒಳ್ಳೆಯ, ಕೆಟ್ಟದು, ಬಿಳಿದು, ಕರಿದು, ಹೊಸದು, ಹಳೆಯ, ಪಿರಿದು, ಹಿರಿದು, ಕಿರಿದು, ಎಳದು-ಮೊದಲಾದವು. 

(ಇ) ಸಂಖ್ಯಾವಾಚಕಗಳು   

    ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲ ಸಂಖ್ಯಾವಾಚಕಗಳು           

ಉದಾಹರಣೆಗೆ:-ಒಂದು, ಎರಡು, ಹತ್ತು, ಸಾವಿರ, ಲಕ್ಷ-ಇತ್ಯಾದಿಗಳು.    (ಒಂದು ಮನೆ, ಎರಡು ಕುದುರೆ, ಸಾವಿರ ಆನೆ-ಹೀಗೆ ಸಂಖ್ಯಾವಾಚಕಗಳು ಗುಣವಾಚಕಗ ಳಂತೆ ನಾಮಪದಗಳಿಗೆ ವಿಶೇಷಣಗಳೂ ಆಗಿರುತ್ತವೆ).  

(ಈ) ಸಂಖ್ಯೇಯವಾಚಕಗಳು     

ಮೂವರು ಮಕ್ಕಳು, ನಾಲ್ವರು ಶಾಸ್ತ್ರಿಗಳು, ಐವರು ವಿದ್ಯಾರ್ಥಿಗಳು-ಎಂಬ ಈ ವಾಕ್ಯಗಳಲ್ಲಿ ಮೂವರು, ನಾಲ್ವರು, ಐವರು ಮೊದಲಾದ ಶಬ್ದಗಳು ಈ ಲೆಕ್ಕದ ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ತಿಳಿಸುತ್ತದಲ್ಲವೆ? ಇಂಥ ಶಬ್ದಗಳಿಂದ ಸಂಖ್ಯೆಯೂ, ವಸ್ತುಗಳೂ ತಿಳಿವಳಿಕೆಗೆ ಬರುತ್ತವೆ.      

ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಶಬ್ದಗಳೆಲ್ಲ ಸಂಖ್ಯೇಯವಾಚಕಗಳೆನಿಸುವುವು.             ಉದಾಹರಣೆಗೆ:-  

ಸಂಖ್ಯೆ                      ಸಂಖ್ಯೇಯ                            ಮೂರು                  ಮೂವರು, ಮೂರನೆಯ                ಎರಡು                   ಇಬ್ಬರು, ಎರಡನೆಯ                      ಐದು                     ಐವರು, ಐದನೆಯ   

(ಉ) ಭಾವನಾಮಗಳು

 ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳೆಲ್ಲ ಭಾವನಾಮಗಳೆನಿಸುವುವು

ಬಿಳಿದರ ಭಾವ - ಬಿಳುಪು (ತದ್ಧಿತಾಂತ ಭಾವನಾಮ) ಕರಿದರ ಭಾವ - ಕಪ್ಪು (ತದ್ಧಿತಾಂತ ಭಾವನಾಮ) ಹಿರಿದರ ಭಾವ - ಹಿರಿಮೆ (ತದ್ಧಿತಾಂತ ಭಾವನಾಮ) ಪಿರಿದರ ಭಾವ - ಪೆರ‍್ಮೆ=(ಹೆಮ್ಮೆ) (ತದ್ಧಿತಾಂತ ಭಾವನಾಮ) 

ನೋಡುವುದರರ ಭಾವ - ನೋಟ (ಕೃದಂತ ಭಾವನಾಮ) 

ಮಾಡುವುದರರ ಭಾವ - ಮಾಟ (ಕೃದಂತ ಭಾವನಾಮ) ಕೊಡುವುದರ ಭಾವ - ಕೂಟ (ಕೃದಂತ ಭಾವನಾಮ) ಇದರ ಹಾಗೆ-

ಬೆಳ್ಪು (ಹಳೆಗನ್ನಡ), 

ಕರ್ಪು (ಹಳೆಗನ್ನಡ), 

ಕೆಂಪು=ಕೆಚ್ಚನೆಯದರ ಭಾವ, 

ಪೆಂಪು (ಹಳೆಗನ್ನಡ) ಇವನ್ನೂ ತಿಳಿಯಬಹುದು. 

 (ಊ) ಪರಿಮಾಣ ವಾಚಕಗಳು 

 (1) ಅಷ್ಟು ದೊಡ್ಡ ಕಲ್ಲು 

 (2) ಇಷ್ಟು ಜನರ ಗುಂಪು 

 (3) ಎಷ್ಟು ಕಾಸುಗಳು? - ಇತ್ಯಾದಿ ವಾಕ್ಯಗಳಲ್ಲಿ ಅಷ್ಟು, ಇಷ್ಟು, ಎಷ್ಟು-ಇತ್ಯಾದಿ ಶಬ್ದಗಳು ಒಂದು ಗೊತ್ತಾದ ಅಳತೆ, ಸಂಖ್ಯೆಯನ್ನು ಹೇಳುವುದಿಲ್ಲ, ಅಂದರೆ ನಿರ್ದಿಷ್ಟಪಡಿಸಿದ ಅಳತೆ, ಸಂಖ್ಯೆ ಇಲ್ಲಿ ಇಲ್ಲ. ಇಂಥ ಶಬ್ದಗಳು ಕೇವಲ ಪರಿಮಾಣಗಳನ್ನು ಮಾತ್ರ ತಿಳಿಸುತ್ತವೆ. ಇಂಥ ಶಬ್ದಗಳನ್ನೇ ಪರಿಮಾಣ ವಾಚಕಗಳು ಎನ್ನುತ್ತಾರೆ.  ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ-ಇತ್ಯಾದಿಗಳನ್ನು ಹೇಳುವ ಶಬ್ದಗಳು ಪರಿಮಾಣವಾಚಕಗಳೆನಿಸುವುವು. 

ಉದಾಹರಣೆಗೆ:-ಅಷ್ಟು, ಇಷ್ಟು, ಹಲವು, ಕೆಲವು, ಅನಿತು, ಇನಿತು, ಎನಿತು, ಪಲವು-ಇತ್ಯಾದಿಗಳು. ಪರಿಮಾಣಕ್ಕೆ:- ಹಲವು ದಿನಗಳು, ಕೆಲವು ಊರುಗಳು-ಇತ್ಯಾದಿ. ಗಾತ್ರಕ್ಕೆ:- ಗುಡ್ಡದಷ್ಟು, ಆನೆಯಷ್ಟು, ಪಲ್ಲದನಿತು-ಇತ್ಯಾದಿ. ಅಳತೆಗೆ:- ಅಷ್ಟು ದೂರ, ಇಷ್ಟು ಪುಸ್ತಕಗಳು-ಇತ್ಯಾದಿ. 

(ಋ) ಪ್ರಕಾರವಾಚಕಗಳು

 (1) ಅಂಥ ಮನುಷ್ಯನುಂಟೇ?

 (2) ಅಂತಹ ವಿಚಾರ ಬೇಡ. 

(3) ಎಂಥ ಬಣ್ಣ. 

 (4) ಇಂಥವರೂ ಉಂಟೇ? - ಇತ್ಯಾದಿ ವಸ್ತುಗಳ ಸ್ಥಿತಿ, ರೀತಿಗಳನ್ನು ತಿಳಿಸುತ್ತವೆ. ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವು. ಇವೂ ಒಂದು ಬಗೆಯ ಗುಣವಾಚಕಗಳೇ ಅಹುದು. 

ಉದಾಹರಣೆಗೆ:- ಅಂಥ, ಅಂಥಹುದು, ಇಂಥ, ಇಂಥದು, ಇಂಥಹುದು, ಎಂತಹ, ಎಂಥ, ಅಂಥವನು, ಅಂಥವಳು, ಅಂಥದು, ಅಂತಹನು, ಇಂತಹನು, ಅಂತಹುದು-ಇತ್ಯಾದಿ. 

 (ಎ) ದಿಗ್ವಾಚಕಗಳು

ದಿಕ್ಕುಗಳು (ನಿಟ್ಟುಗಳ) ಹೆಸರನ್ನು ಸೂಚಿಸುವ ಶಬ್ದಗಳೆಲ್ಲ ದಿಗ್ವಾಚಕಗಳೆ ನಿಸುವುವು. ಉದಾಹರಣೆಗೆ:- ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ವಾಯುವ್ಯ, ಆಗ್ನೇಯ, ನೈಋತ್ಯ, ಮೂಡಲು, ತೆಂಕಲು, ಬಡಗಲು, ಪಡುವಲು, ಆಚೆ, ಈಚೆ-ಇತ್ಯಾದಿಗಳು. 

 (ಏ) ಸರ್ವನಾಮಗಳು 

ಶ್ರೀರಾಮನುು ಕಾಡಿಗೆ ಹೋದನು. ಅವನ ಸಂಗಡ ಸೀತಾಲಕ್ಷ್ಮಣರೂ ಹೊರಟರು. ಅವರು ಅಲ್ಲಿ ಪರ್ಣಶಾಲೆಯಲ್ಲಿ ವಾಸಿಸುತ್ತಿದ್ದರು. ಈ ವಾಕ್ಯಗಳಲ್ಲಿ “ಅವನ ಸಂಗಡ” ಎಂದರೆ ರಾಮನ ಸಂಗಡ ಎಂದು ಅರ್ಥ. “ಅವರು ಅಲ್ಲಿ” ಎಂದರೆ ರಾಮಲಕ್ಷ್ಮಣಸೀತೆಯರು ಆ ಕಾಡಿನಲ್ಲಿ ಎಂದು ಅರ್ಥ. “ಅವನು, ಅವರು, ಅಲ್ಲಿ” ಇತ್ಯಾದಿ ಶಬ್ದಗಳು ನಾಮಪದಗಳ ಸ್ಥಾನದಲ್ಲಿ ಬಳಸುವ ಬೇರೊಂದು ಬಗೆಯ ಶಬ್ದಗಳು. ಹೀಗೆ ಸರ್ವ ವಸ್ತುವಾಚಕಗಳ ಸ್ಥಾನದಲ್ಲೂ ಅವಕ್ಕೆ ಬದಲಾಗಿ ಕೆಲವು ಬೇರೆ ಬಗೆಯ ಶಬ್ದಗಳನ್ನು ಪ್ರಯೋಗಿಸುತ್ತೇವೆ. ಇಂಥ ಶಬ್ದಗಳೇ ಸರ್ವನಾಮಗಳು. ವಸ್ತುವಾಚಕಗಳಾದ ನಾಮಪದಗಳ ಸ್ಥಾನದಲ್ಲಿ ನಿಂತು ಅವನ್ನು ಬೋಧಿಸುವ (ಸೂಚಿಸುವ) ಶಬ್ದಗಳೆಲ್ಲ ಸರ್ವನಾಮಗಳೆನಿಸುವುವು. 


1 ಕಾಮೆಂಟ್‌:

ಆಸರೆ ತಂತ್ರಜ್ಞಾನ ಪ್ರಮುಖ ವೀಡಿಯೋಗಳು.

 ಆತ್ಮೀಯ ಶಿಕ್ಷಕ ಮಿತ್ರರೇ, ಶಿಕ್ಷಕರ e-ಕಲಿಕೆಗೆ ಸಂಬಂಧಿಸಿದ ಪ್ರಮುಖ ವಿಡಿಯೋ ಲಿಂಕ್ಸ್. 1. Google Docs https://youtu.be/zg9cBOvObaI?si=kLF4AydJrg26VJYA 2...